ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 10 ದಿನಗಳ ವಿಶೇಷ ಪಾಸನ್ನು ವಿತರಣೆ ಮಾಡುತ್ತಿರುವ ಬಗ್ಗೆ

ಪ್ರಸ್ತುತ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ರೀತಿಯ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿದೆ. ದಿನಾಂಕ:08.11.2016 ರಿಂದ ಜಾರಿಗೆ ಬರುವಂತೆ ಭಾರತ ಸರ್ಕಾರವು ರೂ.500/- ಮತ್ತು ರೂ.1000/- ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು, ಹೊಸ ನೋಟುಗಳ ಚಲಾವಣೆಯನ್ನು ಜಾರಿಗೆ ತಂದಿರುತ್ತದೆ. ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ರೂ.500/- ಮತ್ತು ರೂ.1000/- ಮುಖಬೆಲೆಯ ಹಿಂಪಡೆದಿರುವ ನೋಟುಗಳನ್ನು ದಿನಾಂಕ:14.11.2016 ರವರೆಗೆ ಸ್ವೀಕರಿಸಲು ಅನುಮತಿ ನೀಡಲಾಗಿತ್ತು. ಪ್ರಸ್ತುತ ಭಾರತ ಸರ್ಕಾರವು ಸದರಿ ನೋಟುಗಳನ್ನು ದಿನಾಂಕ:24.11.2016 ರವರೆಗೆ ಸ್ವೀಕರಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ನಿಗಮದ ವಾಹನಗಳಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಸಮಸ್ಯೆ ಉದ್ಬವವಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ:15.11.2016 ರಿಂದ 24.11.2016 ರವರೆಗೆ ಚಾಲ್ತಿಯಿರುವ ರೂ.500/- ರ 10 ದಿನಗಳ ವಿಶೇಷ ಪಾಸನ್ನು ತಾತ್ಕಲಿಕವಾಗಿ ವಿತರಣೆ ಮಾಡಲು ತೀರ್ಮಾನಿಸಿದೆ. ಸಾರ್ವಜನಿಕ ಪ್ರಯಾಣಿಕರು ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಮುಖಬೆಲೆಯ ಕರೆನ್ಸಿಗಳ ಜೊತೆಯಲ್ಲಿ ಕೇಂದ್ರ ಸರ್ಕಾರ ಹಿಂಪಡೆದಿರುವ ರೂ.500/- ಮತ್ತು ರೂ.1000/- ಮುಖಬೆಲೆಯ ನೋಟುಗಳನ್ನೂ ಸಹ ಪಾವತಿಸಿ ರೂ.500/- ರ 10 ದಿನಗಳ ವಿಶೇಷ ಪಾಸನ್ನು ಪಡೆದು ಬೆಂ.ಮ.ಸಾ.ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ (ಹವಾನಿಯಂತ್ರಿತ ಸೇವೆಗಳನ್ನು ಹೊರತುಪಡಿಸಿ) ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ತಮ್ಮ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ಎನ್ಆರ್ಇಜಿಎ ಕಾರ್ಡ್, ಪ್ಯಾನ್ ಕಾರ್ಡ್, ಅಥವಾ ಸರ್ಕಾರದಿಂದ ವಿತರಿಸಲಾದ ಯಾವುದೇ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಿ ಪಾಸನ್ನು ಪಡೆಯಬಹುದಾಗಿದೆ ಹಾಗೂ ಸದರಿ ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದನ್ನು ಹೊಂದಿ ಸದರಿ ವಿಶೇಷ ಪಾಸಿನೊಂದಿಗೆ ಪ್ರಯಾಣಿಸಬಹುದಾಗಿದೆ.
ಕನ್ನಡ